ಉ. ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮುಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧ ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ.
ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ಅವನೇ ಸಮಸ್ತ ವಿಶ್ವವನ್ನೂ ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೆ ಸೇರಿದೆ. ಆ ಏಕದೇವನನ್ನೇ ಪವಿತ್ರ ಕುರ್ಆನಿನಲ್ಲಿ 'ಅಲ್ಲಾಹ್' ಎಂದು ಕರೆಯಲಾಗಿದೆ. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಪರಿಪಾಲಕನೂ ಒಡೆಯನೂ ಅಧಿಪತಿಯು ಅಲ್ಲಾಹನೇ ಆಗಿರುವಾಗ ಮನುಷ್ಯನ ಆರಾಧನೆ, ದಾಸ್ಯ ಮತ್ತು ಅನುಸರಣೆಗಳೂ ಆತನಿಗೆ ಸಲ್ಲಬೇಕೆಂಬುದು ಬುದ್ಧಿಯ ಬೇಡಿಕೆಯಾಗಿದೆ.
ಪ್ರ. 'ಅಲ್ಲಾಹ್ 'ಮುಸ್ಲಿಮರ ದೇವರೇ?
ಪ್ರ. 'ಅಲ್ಲಾಹ್ 'ಮುಸ್ಲಿಮರ ದೇವರೇ?
ಉ.ನಿಜವಾಗಿ 'ಅಲ್ಲಾಹ್ ' ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀ ಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಎಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ' ಅಲ್ಲಾಹ್ ' ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ.
" ಸರ್ವಸ್ತುತಿಯು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.''(1 . 1 )
ಪವಿತ್ರ ಕುರ್ಆನಿನ ಕೊನೆಯ ಅಧ್ಯಾಯದಲ್ಲಿ ಅಲ್ಲಾಹನ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ;
"ಹೇಳಿರಿ - ನಾನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ, ಮತ್ತು ಮನುಷ್ಯರ ಆರಾಧ್ಯನ ಅಭಯ ಯಾಚಿಸುತ್ತೇನೆ." (114 : 1 - 3 )
ಪವಿತ್ರ ಕುರ್ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್ ರ (ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ- ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಅದು ಘಂಟಾಘೋಷವಾಗಿ ಸಾರುತ್ತದೆ.