Articles



ದೇವನ ಅಸ್ತಿತ್ವ 

ಪೇಟೆಯಲ್ಲಿ ಅಂಗಡಿಯೊಂದಿದೆ. ಅದಕ್ಕೆ ಅಂಗಡಿಗಾರನಿಲ್ಲ. ಸಾಮಾನು ತರುವವರಿಲ್ಲ. ಅದನ್ನು ರಕ್ಷಣೆ ಮಾಡುವವರಿಲ್ಲ. ಅಂಗಡಿ ತನ್ನಿಂತಾನೇ ನಡೆಯುತ್ತದೆ. ಅದರಲ್ಲಿ ಸಾಮಾನು ತನ್ನಷ್ಟಕ್ಕೆ ಬಂದು ಸೇರುತ್ತಲೂ ತನ್ನಷ್ಟಕ್ಕೆ ಗ್ರಾಹಕರ ಕೈ ಸೇರುತ್ತಲೂ ಇರುತ್ತದೆಂದು ಯಾರಾದರೂ ನಿಮ್ಮೊಡನೆ ಹೇಳಿದರೆ ನೀವು ಅವನ ಮಾತನ್ನು ನಂಬುವಿರಾ? ಯಾವ ಅಂಗಡಿಯಲ್ಲಾದರು ಸಾಮಾನನ್ನು ಯಾರೂ ತಾರದೆ ತಾನಾಗಿ ಬರುತ್ತದೆ, ತನ್ನಿಂತಾನೇ ಕಳ್ಳತನ, ಲೂಟಿ, ದರೋಡೆಗಳಿಂದ ರಕ್ಷಿಸಲ್ಪಡುತ್ತದೆ ಎಂಬುದನ್ನು ನೀವು ನಂಬುವಿರಾ? ನಿಮ್ಮ ಅಂತರಂಗದೊಡನೆ ಕೇಳಿರಿ-ಜಗತ್ತಿನಲ್ಲೆಲ್ಲಾದರೂ ಇಂತಹ ಅಂಗಡಿಯೊಂದಿರಬಹುದೆಂಬ ಮಾತು ಸ್ವಲ್ಪವಾದರೂ ಬುದ್ದಿ ಸ್ತಿಮಿತದಲ್ಲಿರುವಾತನಿಗೆ ಅರ್ಥವಾಗಬಹುದೇ?
  ಇನ್ನೂ ಯೋಚಿಸಿರಿ. ಒಬ್ಬನು ನಿಮ್ಮೊಡನೆ, "ಈ ಪಟ್ಟಣದಲ್ಲೊಂದು ಕಾರ್ಖಾನೆಯಿದೆ. ಅದಕ್ಕೆ ಇಂಜಿನಿಯರಾರು ಇಲ್ಲ. ಅದಕ್ಕೆ ಮಾಲಿಕನಿಲ್ಲ. ಮೇಸ್ತ್ರಿಯಿಲ್ಲ. ಇಡೀ ಕಾರ್ಖಾನೆ ತನ್ನಷ್ಟಕ್ಕೆ ಉಂಟಾಗಿದೆ. ಎಲ್ಲ ಯಂತ್ರಗಳೂ ತಾವಾಗಿಯೇ ನಿರ್ಮಾಣಗೊಂಡಿವೆ. ಎಲ್ಲ ಬಿಡಿ ಭಾಗಗಳೂ ತಾವಾಗಿಯೇ ತಂತಮ್ಮ ಸ್ಥಾನಗಳಲ್ಲಿ ಬಂದು ಕೂಡಿಕೊಂಡಿವೆ. ಎಲ್ಲ ಯಂತ್ರಗಳೂ ತಾವಾಗಿಯೇ ಚಲಿಸುತ್ತಿವೆ ಮತ್ತು ಅದರಿಂದ ಅತ್ಯದ್ಭುತ ವಸ್ತುಗಳು ತಾವಾಗಿಯೇ ತಯಾರಾಗಿ ಹೊರಬರುತ್ತಲೂ ಇವೆ" ಎಂದು ಹೇಳಿದಾಗ ನೀವು ಅವಾಕ್ಕಾಗಿ ಎವೆಯಿಕ್ಕದೆ ಅವನ ಮುಖವನ್ನೇ ನೋಡದಿರುವಿರಾ? ಅವನ ತಲೆ ಕೆಟ್ಟು ಹೋಗಿರಬೇಕೆಂಬ ಸಂದೇಹ ನಿಮಗೆ ಉಂಟಾಗದೇ? ಒಬ್ಬ ಹುಚ್ಚನಲ್ಲದೆ ಇನ್ನಾರಾದರೂ ಇಂತಹ ಅರ್ಥಹೀನ ಮಾತುಗಳನ್ನಾಡಬಹುದೇ?
  ದೂರದ ದೃಷ್ಟಾಂತಗಳನ್ನು ಬಿಡೋಣ. ನಿಮ್ಮ ಕಣ್ಣ ಮುಂದೆಯೇ ಉರಿಯುತ್ತಿರುವ ಈ ವಿದ್ಯುದ್ದೀಪದಲ್ಲಿ ಬೆಳಕು ತನ್ನಷ್ಟಕ್ಕೆ ಉಂಟಾಯಿತೆಂದು ಯಾರಾದರೂ ಹೇಳಿದರೆ ಅದನ್ನು ನೀವು ಒಪ್ಪುವಿರಾ? ನಿಮ್ಮ ಮುಂದಿರುವ ಈ ಕುರ್ಚಿಯು ತನ್ನಿಂತಾನೇ ಉಂಟಾಯಿತೆಂದು ಮಹಾ ತತ್ವಜ್ಞಾನಿಯೇ ಹೇಳಿದರೂ ನೀವು ನಂಬುವಿರಾ? ನೀವು ಉಟ್ಟಿರುವ ಬಟ್ಟೆಗಳು ಯಾರು ನೇಯಲಿಲ್ಲವೆಂದೂ ಅವು ತಮ್ಮಷ್ಟಕ್ಕೆ ಉಂಟಾದುವು ಎಂದು ಜಗದ್ವಿಖ್ಯಾತ ಪಂಡಿತನೊಬ್ಬ ಹೇಳಿದರೂ ನೀವು ಸಮ್ಮತಿಸುವಿರಾ? ನಿಮ್ಮ ಮುಂದೆ ನಿಂತಿರುವ ಈ ಕಟ್ಟಡಗಳನ್ನು ಯಾರೂ ನಿರ್ಮಿಸಲಿಲ್ಲವೆಂದೂ ಅವು ತಾವಾಗಿಯೇ ಮೇಲೇರಿ ಬಂದಿವೆಯೆಂದು ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಒಟ್ಟಾಗಿ ನಿಮಗೆ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದರೂ ಅವರು ಹೇಳಿದ್ದಾರೆಂದ ಮಾತ್ರಕ್ಕೆ ಇಂತಹ ಅರ್ಥಹೀನ ಮಾತುಗಳ ಮೇಲೆ ನಿಮಗೆ ನಂಬಿಕೆ ಬರಬಹುದೇ?  
ನೀವು ಹಗಲಿರುಳು ನೋಡುತ್ತಿರುವ ವಸ್ತುಗಳ ಕೆಲವು ಉದಾಹರಣೆಗಳನ್ನು ಮಾತ್ರ ನಿಮ್ಮ ಮುಂದಿಟ್ಟಿದ್ದೇನೆ. ಅವುಗಳ ಆಧಾರದಲ್ಲಿ ಯೋಚಿಸಿ ನೋಡಿ. ಒಂದು ಸಾಮಾನ್ಯ ಅಂಗಡಿಯು ಅದರ ಮಾಲಿಕನಿಲ್ಲದೆ ನಡೆಯಲಾರದೆಂದೂ ಒಂದು ಚಿಕ್ಕ ಕಾರ್ಖಾನೆಯು ಅದರ ನಿರ್ಮಾಪಕನ ಹೊರತು ಸ್ಥಾಪಿಸಲ್ಪಡಲಾರದು ಮತ್ತು ನಡೆಸುವವನಿಲ್ಲದೆ ನಡೆಯಲಾರದೆಂದೂ ನಿಮ್ಮ ಅಂತಃಕರಣ ನುಡಿಯುವಾಗ ಈ ಭೂಮಿ ಆಕಾಶಗಳ ಅಗಾಧ ಕಾರ್ಖಾನೆ, ಗಡಿಯಾರದ ಬಿಡಿಭಾಗಗಳಂತೆ ಚಲಿಸುತ್ತಿರುವ ಸೂರ್ಯ, ಚಂದ್ರ, ನಕ್ಷತ್ರಾದಿಗಳು, ಮಹಾ ಸಾಗರದಿಂದ ಏಳುತ್ತಿರುವ ನೀರಾವಿ, ಆವಿಯಿಂದ ಮೋಡವಾಗುವುದು, ಮೋಡಗಳನ್ನು ಗಾಳಿಯು ಎತ್ತಿಕೊಂಡು ಭೂಮಿಯ ಮುಲೆ ಮುಲೆಗಳಿಗೆ ಒಯ್ಯುವುದು,ಆ ಬಳಿಕ ಸೂಕ್ತ ಸಮಯದಲ್ಲಿ ಅವುಗಳನ್ನು ತಣಿಸಿ ಉಗಿಯನ್ನು ಪುನಃ ನೀರಾಗಿ ಪರಿವರ್ತಿಸುವುದು, ಆ ನೀರು ಮಳೆಯ ಹನಿಗಳ ರೂಪದಲ್ಲಿ ನೆಲಕ್ಕೆ ಬೀಳಿಸಲ್ಪಡುವುದು, ಅದರಿಂದ ಒಣಗಿ ಸತ್ತಂತಿದ್ದ ನೆಲದಿಂದ ಹಚ್ಚ ಹಸಿರಾದ ಸಸ್ಯಗಳು ಹೊರಬರುವುದು, ಅವುಗಳಿಂದ ನಾನಾ ತರದ ಧಾನ್ಯಗಳು, ಬಣ್ಣ ಬಣ್ಣದ ಹೂ - ಹಣ್ಣುಗಳು ಸೃಷ್ಟಿಯಾಗುವುದು ಇವೆಲ್ಲವೂ ಓರ್ವ ಕರ್ತನಿಲ್ಲದೆ ತಾನಾಗಿಯೇ ಉಂಟಾದುವೆಂದೂ ನಡೆಸುವಾತನಿಲ್ಲದೆ ತನ್ನಷ್ಟಕ್ಕೆ ನಡೆಯುತ್ತಲಿವೆಯೆಂದು ನೀವು ಒಪ್ಪಿಕೊಳ್ಳುವುದಾದರೂ ಹೇಗೆ? ಒಂದು ಕುರ್ಚಿ, ಒಂದು ಗಜ ಬಟ್ಟೆ, ಒಂದು ಸಣ್ಣ ಗೋಡೆಯ ಬಗೆಗೂ ಅವು ತಾವಾಗಿಯೇ ಉಂಟಾದುವು ಎಂದು ಯಾರಾದರೂ ಹೇಳಿದರೆ ಅವರ ಮೆದುಳು ಹಾಳಾಗಿದೆ ಎಂದೇ ನೀವು ನಿರ್ಧರಿಸಿ ಬಿಡುವಿರಿ. ಹಾಗಾದರೆ ಈ ಭೂಮಿ ತನ್ನಿಂತಾನೇ ಉಂಟಾಯಿತು, ಸಮಸ್ತ ಪ್ರಾಣಿ ವರ್ಗಗಳು ತಮ್ಮಷ್ಟ್ತಕ್ಕೆ ಹುಟ್ಟಿ ಬಂದುವು, ಮನುಷ್ಯನಂತಹ ಅಧ್ಬುತ ಜೀವಿಯು ತಾನಾಗಿಯೇ ಉಂಟಾಗಿ ಬಿಟ್ಟಿತೆಂದು ಹೇಳುವವರ ಮೆದುಳು ಕೆಟ್ಟಿದೆ ಎನ್ನುವುದರಲ್ಲಿ ಸಂದೇಹವೇನಿದೆ





ಏಕದೇವವಾದ 
ಈ ಲೋಕದಲ್ಲಿ ನಡೆಯುವ ಯಾವ ಕೆಲಸವೇ ಆದರೂ - ಅದು ಚಿಕ್ಕದಿರಲಿ, ದೊಡ್ಡದಿರಲಿ - ಅದರ ಹೊಣೆಯನ್ನು ಒಬ್ಬನೇ ವಹಿಸದಿದ್ದರೆ ಅದು ಸುವ್ಯವಸ್ಥಿತವಾಗಿಯು ನಿಯಮಬದ್ಧವಾಗಿಯು ಸರ್ವಥಾ ಆಗಲಾರದೆಂಬುದನ್ನು ನಿಮ್ಮಲ್ಲಿ ಪ್ರತಿಯೊಬ್ಬನ ಮನಸ್ಸು ಸಾಕ್ಷ್ಯ ಹೇಳುವುದು. ಒಂದು ಶಾಲೆಗೆ ಇಬ್ಬರು ಮುಖ್ಯೋಪಾಧ್ಯಾಯರು, ಒಂದು ಸಂಸ್ಥೆಗೆ ಇಬ್ಬರು ನಿರ್ದೇಶಕರು, ಒಂದು ಸೈನ್ಯಕ್ಕೆ ಇಬ್ಬರು ಸೇನಾಪತಿಗಳು, ಒಂದು ಸಾಮ್ರಾಜ್ಯಕ್ಕೆ ಇಬ್ಬರು ಅರಸರು, ಒಂದು ರಾಷ್ಟ್ರಕ್ಕೆ ಇಬ್ಬರು ರಾಷ್ಟ್ರಾಧ್ಯಕ್ಷರು ಇರುವುದನ್ನು ನೀವೆಂದಾದರೂ ಕೇಳಿದ್ದೀರಾ? ಹೀಗೆಲ್ಲಾ ಇದ್ದರೆ, ಒಂದು ದಿನಕ್ಕಾದರು ಅಲ್ಲಿಯ ವ್ಯವಸ್ಥೆ ಸರಿಯಾಗಿರಬಹುದೇ? ಒಂದು ಕೆಲಸವನ್ನು ಒಬ್ಬನಿಗಿಂತ ಹೆಚ್ಚು ಮಂದಿಯ ಹೊಣೆಗಾರಿಕೆಗೆ ಬಿಟ್ಟಾಗ ಅಲ್ಲಿ ಸಂಪೂರ್ಣ ಅವ್ಯವಸ್ಥೆ ಉಂಟಾಗುವುದನ್ನು ಮತ್ತು ಜಗಳಗಳು ಉಂಟಾಗುವುದನ್ನು ನಿಮ್ಮ ಜೀವನದ ಚಿಕ್ಕ ಪುಟ್ಟ ವ್ಯವಹಾರಗಳಲ್ಲೂ ಅನುಭವಿಸುತ್ತಿರುವಿರಿ. ಸುವ್ಯವಸ್ಥೆ, ಕ್ರಮಬದ್ಧತೆ, ಶಿಷ್ಟಾಚಾರ, ಪ್ರಶಾಂತತೆಗಲಿರುವಲ್ಲೆಲ್ಲ ಒಂದೇ ಶಕ್ತಿಯ ಸ್ವಾಮ್ಯವಿರುತ್ತದೆ. ಒಂದೇ ಅಸ್ತಿತ್ವ ಅಧಿಕಾರದಲ್ಲಿರುತ್ತದೆ ಮತ್ತು ಒಬ್ಬನೇ ಸೂತ್ರಧಾರಿಯಾಗಿರುತ್ತಾನೆ. ಇದರ ಹೊರತು ಸುವ್ಯವಸ್ಥೆಯ ಕಲ್ಪನೆಯನ್ನೂ ಮಾಡಲಾಗದು.
ಇದು ಒಂದಿಷ್ಟು ಬುದ್ಧಿಶಕ್ತಿಯುಲ್ಲವನೂ ಒಪ್ಪಿಕೊಳ್ಳುವಂತಹ ಸರಳವಾದ ವಿಷಯ. ಇದನ್ನು ಮುಂದಿಟ್ಟುಕೊಂಡು ನಿಮ್ಮ ಸುತ್ತಮುತ್ತಲಿರುವ ಜಗತ್ತಿನ ಮೇಲೊಮ್ಮೆ ದೃಷ್ಟಿ ಹಾಯಿಸಿರಿ. ನಿಮ್ಮ ಮುಂದಿರುವ ಈ ಅಗಾಧ ವಿಶ್ವ, ಬಾಹ್ಯಾಕಾಶದಲ್ಲಿ ಸುತ್ತುತ್ತಿರುವಂತೆ ನಿಮಗೆ ತೋರುತ್ತಿರುವ ಕೊಟ್ಯಾವಧಿ ಗ್ರಹ ನಕ್ಷತ್ರಾದಿಗಳು, ನೀವು ವಾಸಿಸುತ್ತಿರುವ ಈ ಭೂಮಿ, ರಾತ್ರೆ ಬೆಳಗುತ್ತಿರುವ ಈ ಚಂದ್ರ, ದಿನಂಪ್ರತಿ ಉದಯಿಸುತ್ತಿರುವ ಈ ಸೂರ್ಯ, ಚೆಂಡುಗಳಂತೆ ತಿರುಗುತ್ತಿರುವ ಬುಧ, ಗುರು, ಶುಕ್ರ, ಶನಿಯೇ ಮೊದಲಾದ ಗ್ರಹಗಳು, ಅವುಗಳ ಪರಿಭ್ರಮಣದಲ್ಲಿ ಎಷ್ಟೊಂದು ಸುವ್ಯವಸ್ಥೆ ಇದೆಯೆಂಬುದನ್ನ್ನು ಗಮನಿಸಿರಿ. ರಾತ್ರೆಯು ತನ್ನ ನಿಶ್ಚಿತ ಸಮಯಕ್ಕಿಂತ ಮುಂಚೆ ಬಂದುದನ್ನು ನೀವೆಂದಾದರೂ ಕಂಡಿದ್ದೀರಾ? ಹಗಲು ತನ್ನ ನಿಯಮಿತ ಸಮಯಕ್ಕಿಂತ ಮೊದಲು ಬಂದುದಿದೆಯೇ? ಚಂದ್ರನೆಂದಾದರು ಬಂದು ಭೂಮಿಗೆ ಬಡಿದದ್ದಿದೆಯೇ? ಸೂರ್ಯನು ತನ್ನ ಪಥವನ್ನು ಬಿಟ್ಟು ಚಲಿಸಿದ್ದಿದೆಯೇ? ಯಾವುದಾದರೊಂದು ನಕ್ಷತ್ರವು ತನ್ನ ಕಕ್ಷೆಯಿಂದ ಸರಿದು ಹೋಯಿತೆಂದು ಕೇಳಿದ್ದೀರಾ? ನಿಮ್ಮ ಭೂಮಿಗಿಂತ ಲಕ್ಷಾವಧಿ ಪಟ್ಟು ದೊಡ್ದದಾಗಿಯು ಇರುವಂತಹ ಕೋಟಿಗಟ್ಟಲೆ ನಕ್ಷತ್ರಗಳೆಲ್ಲ ಗಡಿಯಾರದ ಯಂತ್ರಭಾಗಗಳಂತೆ ಒಂದು ಪ್ರಬಲ ಕಾನೂನಿನಲ್ಲಿ ಬಿಗಿಯಲ್ಪಟ್ಟು ನಿಶ್ಚಿತ ಗಣನೆಗನುಸಾರವಾಗಿ ನಿಯಮಿತ ವೇಗದೊಂದಿಗೆ, ನಿಶ್ಚಯಿಸಲ್ಪಟ್ಟ ಪಥದಲ್ಲಿ ಚಲಿಸುತ್ತಿವೆ. ಅವುಗಳ ವೇಗದಲ್ಲಿ ವ್ಯತ್ಯಾಸವಾಗುವುದಿಲ್ಲ. ಅವು ತಂತಮ್ಮ ಪಥದಿಂದ ಲೇಶಮಾತ್ರವೂ ಸರಿಯುವುದಿಲ್ಲ. ಅವುಗಳ ನಡುವೆ ಇರಿಸಲಾಗಿರುವ ಸಂಬಂಧದಲ್ಲಿ ಕಿಂಚಿತ್ತಾದರೂ ವ್ಯತ್ಯಾಸ ಬಂದುಹೋದರೆ, ಇಡೀ ವ್ಯವಸ್ಥೆಯೇ ಅಸ್ತವ್ಯಸ್ತವಾಗುವುದು. ರೈಲುಗಳು ಡಿಕ್ಕಿ ಹೊಡೆದಂತೆಯೇ ಆಕಾಶಕಾಯಗಳು ಪರಸ್ಪರ ಡಿಕ್ಕಿ ಹೊಡೆಯಬಹುದು. 
ಇದು ಬಾನಲೋಕದ ಮಾತಾಯಿತು. ನಮ್ಮ ಭೂಮಿಯ ಮೇಲೂ ನಮ್ಮ ಸ್ವಂತದ ಕಡೆಗೂ ದೃಷ್ಟಿ ಹಾಯಿಸಿರಿ. ಈ ಮಣ್ಣಿನ ಗೋಲದ ಮೇಲೆ ನೀವು ನೋಡುತ್ತಿರುವ ಜೀವನದ ಆಟವೆಲ್ಲ ಕೆಲವು ವ್ಯವಸ್ಥಿತ ನಿಯಮಗಳ ನಿಮಿತ್ತ ನೆಲೆನಿಂತಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಯು  ಸಮಸ್ತ ವಸ್ತುಗಳನ್ನು ತನ್ನ ಸುತ್ತಲೂ ಬಿಗಿದುಕೊಂಡಿದೆ. ಅದು ಒಂದರೆಕ್ಷನವಾದರೂ ತನ್ನ ಹಿಡಿತವನ್ನು ಸಡಿಲಿಸಿಬಿಟ್ಟರೆ ಇಡೀ ಭೂಕರ್ಮ ಶಾಲೆಯು ಚೆಲ್ಲಾಪಿಲ್ಲಿಯಾಗಿ ಚದುರಿ ಹೋಗುವುದು. ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಿಡಿಭಾಗಗಲೆಲ್ಲವೂ ಒಂದು ನಿರ್ದಿಷ್ಟ ನಿಯಮಕ್ಕೆ ಬದ್ಧವಾಗಿವೆ. ಈ ನಿಯಮದಲ್ಲಿ ಎಂದೆಂದಿಗೂ ವ್ಯತ್ಯಾಸ ಬರುವುದಿಲ್ಲ. ವಾಯು ತನ್ನ ನಿಯಮವನ್ನನುಸರಿಸುತ್ತದೆ. ನೀರು ತನ್ನ ನಿಯಮಕ್ಕೆ ಬದ್ಧವಾಗಿದೆ. ಬೆಳಕಿಗಿರುವ ನಿಯಮವನ್ನು ಅದು ಪಾಲಿಸುತ್ತದೆ. ಶೀತೊಷ್ಣಗಳಿಗೆ ನಿಶ್ಚಯಿಸಲಾಗಿರುವ ನಿಯಮಕ್ಕೆ ಅವು ಅಧೀನವಾಗಿವೆ. ಕಲ್ಲು, ಮಣ್ಣು, ಲೋಹಗಳು, ವಿದ್ಯುತ್ತು, ಹಬೆ, ಸಸ್ಯ ವರ್ಗ, ಪ್ರಾಣಿ ವರ್ಗ- ಇವುಗಳ ಪೈಕಿ ಯಾವುದೂ ತನ್ನ ಮೇರೆಯನ್ನು ಮೀರುವ, ತನ್ನ ಗುಣವನ್ನು ಬದಲಾಯಿಸಿಕೊಳ್ಳುವ ಅಥವಾ ತನ್ನ ಪಾಲಿಗೆ ಬಂದಿರುವ ಕರ್ತವ್ಯವನ್ನು ಮಾಡದಿರುವ ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಹೊಂದಿಲ್ಲ.
ಅದಲ್ಲದೆ ಈ ಕಾರ್ಖಾನೆಯ ಎಲ್ಲ ಬಿಡಿ ಭಾಗಗಳೂ ತಂತಮ್ಮ ಮೇರೆಗಳೊಳಗೆ ತಮಗೆ ನಿಶ್ಚಯಿಸಲ್ಪಟ್ಟ ನಿಯಮಗಳನ್ನು ಪಾಲಿಸುತ್ತಾ ಒಂದನ್ನೊಂದು ಹೊಂದಿಕೊಂಡು ಕಾರ್ಯವೆಸಗುತ್ತವೆ. ಈ ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲವೂ ಈ ಎಲ್ಲ ವಸ್ತುಗಳೂ ಶಕ್ತಿಗಳೂ ಪರಸ್ಪರ ಪೂರಕವಾಗಿ ವರ್ತಿಸುವುದರಿಂದಲೇ ನಡೆಯುತ್ತದೆ. ಒಂದು ಸಣ್ಣ ಬೀಜದ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಭೂಮಿ ಮತ್ತು ಆಕಾಶಗಳ ಎಲ್ಲ ಶಕ್ತಿಗಳೂ ಒಟ್ಟಾಗಿ ಅದರ ಪೋಷಣೆಗೆ ಸಹಕರಿಸದಿದ್ದರೆ ಅದು ಮೊಳೆತು, ಬೆಳೆದು ಮರವಾಗಲು ಸಾಧ್ಯವೇ ಇಲ್ಲ. ಭೂಮಿಯು ತನ್ನ ಭಂಡಾರದಿಂದ ಅದಕ್ಕೆ ಆಹಾರ ನೀಡುತ್ತದೆ. 
ಸೂರ್ಯನು ಅದಕ್ಕೆ ಸಾಕಷ್ಟು  ಉಷ್ಣವನ್ನು ನೀಡುತ್ತದೆ. ನೀರಿನಿಂದ ಬೇಡಿದಷ್ಟನ್ನು ನೀರು ನೀಡುತ್ತದೆ. ವಾಯುವಿನಿಂದ ಕೇಳಿದಷ್ಟನ್ನು ವಾಯು ಕೊಡುತ್ತದೆ. ಇರುಳು ಅದಕ್ಕೆ ತಂಪನ್ನೂ ಇಬ್ಬನಿಯನ್ನೂ ಒದಗಿಸುತ್ತದೆ. ಹಗಲು ಅದಕ್ಕೆ ಉಷ್ಣವನ್ನೊದಗಿಸಿ ಬಲಿಯುವಂತೆ ಮಾಡುತ್ತದೆ. ಹೀಗೆ ಇವೆಲ್ಲ ತಿಂಗಳು ಗಟ್ಟಲೆ, ವರ್ಷಗಟ್ಟಲೆ ನಿರಂತರವಾಗಿ ಮತ್ತು ಸುವ್ಯವಸ್ಥಿತವಾಗಿ ಒಟ್ಟಾಗಿ ಅದನ್ನು ಸಾಕುತ್ತಾ ಸಲಹುತ್ತಾ ಇದ್ದುದರ ಪರಿಣಾಮವಾಗಿ ಅದು ಮರವಾಗುತ್ತದೆ ಮತ್ತು ಅದರಲ್ಲಿ ಫಲಗಳು ಹಿಡಿಯುತ್ತವೆ. ನಿಮ್ಮ ಜೀವನಾಧಾರಕ್ಕಾಗಿ ನೀವು ಬೆಳೆಸುತ್ತಿರುವ ಎಲ್ಲ ಬೆಳೆಗಳು ಈ ಎಲ್ಲ ವಿಧದ ಶಕ್ತಿಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದಲೇ ಸಿದ್ಧವಾಗುವುವು. ಮಾತ್ರವಲ್ಲ ಭೂಮಿ - ಆಕಾಶಗಳ ಸಕಲ ಶಕ್ತಿಗಳೂ ಒಟ್ಟಾಗಿ ನಿಮ್ಮ ಪೋಷಣೆಯಲ್ಲಿ ತೊಡಗಿರುತ್ತವೆ. ಈ ಸಂಯುಕ್ತ ಕಾರ್ಯದಲ್ಲಿ ಅವುಗಳ ಪೈಕಿ ವಾಯು ಮತ್ತು ಉಷ್ಣತೆಯೊಂದಿಗೆ ನೀರು ನೆರವಾಗುವುದನ್ನು ನಿರಾಕರಿಸಿದರೆ, ಮಳೆಯ ಒಂದು ಹನಿಯು ನಿಮ್ಮ ಮೇಲೆ ಬೀಳಲಾರದು. ನೀರಿನೊಂದಿಗೆ ಮಣ್ಣು ಸಹಕರಿಸುವುದನ್ನು ಬಿಟ್ಟರೆ, ನಿಮ್ಮ ತೋಟಗಳೆಲ ಒಣಗಿ ಹೋಗುವುವು. ನಿಮ್ಮ ಹೊಲಗಳಲ್ಲಿ ಎಂದಿಗೂ ಬೆಳೆ ಬೆಳೆಯಲಾರದು. ನಿಮ್ಮ ಕಟ್ಟಡಗಳು ನಿರ್ಮಾಣಗೊಳ್ಳಲಾರವು. ಬೆಂಕಿಕಡ್ಡಿಯ ಘರ್ಷಣೆಯಿಂದ ಬೆಂಕಿ ಉಂಟಾಗಲು ಒಪ್ಪದಿದ್ದರೆ ನಿಮ್ಮ ಒಲೆಗಳೆಲ್ಲ ತಣ್ಣಗಾಗುವುವು ಮತ್ತು ನಿಮ್ಮ ಕಾರ್ಖಾನೆಗಳು ಒಮ್ಮೆಲೇ ನಿಂತುಹೋಗುವುವು. ಕಬ್ಬಿನವು ಬೆಂಕಿಯೊಂದಿಗೆ ಸಂಬಂಧ ಕಡಿದುಕೊಂಡರೆ ನಿಮ್ಮ ಉಗಿಬಂಡಿಗಳು, ಮೋಟಾರು ವಾಹನ ಬಿಡಿ, ಒಂದು ಚೂರಿಯನ್ನು ನೀವು ತಯಾರಿಸಲಾರಿರಿ. ಅಂತು ಈ ಅಗಾಧವಾದ ಸಾಮ್ರಾಜ್ಯದ ಎಲ್ಲ ಇಲಾಖೆಗಳೂ ಕಟ್ಟುನಿಟ್ಟಾಗಿ ಒಂದನ್ನೊಂದು ಕೂಡಿಕೊಂಡು ಕಾರ್ಯವೆಸಗುತ್ತಿರುವುದರಿಂದಲೂ ಯಾವುದೇ ಯಾವುದೇ ಇಲಾಖೆಯ ಕಾರ್ಯಕರ್ತರಿಗೆ ತಮ್ಮ ಕರ್ತವ್ಯದಿಂದ ಹಿಂಜರಿಯುವ ಅಥವಾ ನಿಶ್ಚಿತ ನಿಯಮ ಪ್ರಕಾರ ಇತರ ಇಲಾಖೆಗಳ ಕಾರ್ಯಕರ್ತರೊಂದಿಗೆ ಸಹಕಾರ ನೀಡುವುದನ್ನು ನಿರಾಕರಿಸುವ ಸಾಮರ್ಥ್ಯವಿಲ್ಲದೆ ಹೋದುದರಿಂದಲೂ ನೀವಿರುವ ಜಗತ್ತು ನೆಲೆನಿಂತಿದೆ. 
ನಾನೀಗ ವಿವರಿಸಿದುದರಲ್ಲೆನಾದರೂ ಸುಳ್ಳಿದೆಯೇ? ಅಥವಾ ವಸ್ತುಸ್ಥಿತಿಗೆ ವಿರುದ್ಧವಾದ ವಿಷಯವಿದೆಯೇ? ಇದರಲ್ಲಿ ಸುಳ್ಳಿಲ್ಲ - ಇವೆಲ್ಲ ಸತ್ಯವೆಂದೇ ನೀವು ಒಪ್ಪುವಿರಿ. ಹಾಗಾದರೆ, ಈ ಅಧ್ಬುತ ವ್ಯವಸ್ಥೆ, ಈ ಆಶ್ಚರ್ಯಕರ ಕ್ರಮಬದ್ಧತೆ, ಈ ಪರಿಪೂರ್ಣ ಮಟ್ಟದ ಹೊಂದಾಣಿಕೆ, ಭೂಮಿ - ಆಕಾಶಗಳಲ್ಲಿರುವ ಅಸಂಖ್ಯಾತ  ವಸ್ತುಗಳ ಹಾಗೂ ಶಕ್ತಿಗಳ ಮಧ್ಯೆ ಸಾಮ್ಯತೆ - ಸಾದೃಶ್ಯಗಳಿರಲು ಕಾರಣವೇನು? ಎಷ್ಟೋ ಕೋಟಿ ವರ್ಷಗಳಿಂದ ಈ ವಿಶ್ವವು ಹೀಗೆಯೇ ನಡೆದು ಬಂದಿದೆ.  ಲಕ್ಷಾವಧಿ ವರ್ಷಗಳಿಂದ ಈ ಭೂಮಿಯಲ್ಲಿ ಸಸ್ಯಗಳು ಬೆಳೆಯುತ್ತಲೂ ಪ್ರಾಣಿಗಳು ಹುಟ್ಟುತ್ತಲು ಇವೆ. ಇದರ ಮೇಲೆ ಮಾನವನು ಎಷ್ಟು ಕಾಲದಿಂದ ವಾಸಿಸುತ್ತ ಬಂದಿರುವನೆಂದು ಗೊತ್ತಿಲ್ಲ. ಈ ಅವಧಿಯಲ್ಲಿ ಎಂದೂ ಚಂದ್ರನು ಭೂಮಿಯ ಮೇಲೆ ಬೀಳಲಿಲ್ಲ. ಭೂಮಿಯು ಸೂರ್ಯನಿಗೆ ಢಿಕ್ಕಿ  ಹೊಡೆಯಲಿಲ್ಲ. ನೀರು ಮಣ್ಣಿನೊಡನೆ ಕೋಪಗೊಳ್ಳಲಿಲ್ಲ. ಉಷ್ಣತೆಯು ಬೆಂಕಿಯೊಂದಿಗಿರುವ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಈ ಮಹಾ ಸಾಮ್ರಾಜ್ಯದ ಎಲ್ಲ ರಾಜ್ಯಗಳೂ ಎಲ್ಲ ಇಲಾಖೆಗಳೂ ಎಲ್ಲ ಕಾರ್ಯಕರ್ತರೂ ಇಷ್ಟೊಂದು ಕಾನೂನು ಬದ್ಧವಾಗಿಯು ಶಿಸ್ತು ಬದ್ಧವಾಗಿಯು ನಡೆಯುತ್ತಿರುವುದೇಕೆ? ಅವರೊಳಗೆ ಕಲಹವೇಕಾಗುವುದಿಲ್ಲ? ಘರ್ಷಣೆಗಳೇಕೆ ನಡೆಯುವುದಿಲ್ಲ? ಇವೆಲ್ಲ ಒಂದೇ ವ್ಯವಸ್ಥೆಗೆ ಬದ್ಧವಾಗಿರುವುದು ಯಾವುದರಿಂದ? ಇದರ ಉತ್ತರವನ್ನು ನಿಮ್ಮ ಅಂತರಂಗದೊಡನೆ ಕೇಳಿರಿ. ಒಬ್ಬನೇ ದೇವನು ಇಡೀ ವಿಶ್ವದ ಸಾರ್ವಭೌಮನಾಗಿದ್ದಾನೆ ಎಂದೂ ಅವನೋರ್ವನ ಪ್ರಬಲ ಶಕ್ತಿಯೇ ಎಲ್ಲರನ್ನೂ ನಿಯಂತ್ರಿಸುತ್ತದೆಂದು  ನಿಮ್ಮ ಅಂತಃಕರಣವೇ ಸಾಕ್ಷ್ಯ ನುಡಿಯುದಿಲ್ಲವೇ? ಹತ್ತಿಪ್ಪತ್ತಲ್ಲ, ಇಬ್ಬರು ದೇವರು ಈ ವಿಶ್ವದ ಒಡೆಯರಾಗಿರುತ್ತಿದ್ದರೂ ಇದರ ವ್ಯವಸ್ಥೆಯು ಇಷ್ಟೊಂದು ಕ್ರಮಬದ್ಧವಾಗಿ ಎಂದೆಂದಿಗೂ ನಡೆಯಲಾರದು. ಒಂದು ಸಣ್ಣ ಶಾಲೆಯ ಆಡಳಿತವು ಇಬ್ಬರು ಮುಖ್ಯೋಪಾಧ್ಯಾಯರ ಅಧಿಕಾರವನ್ನು ಸಹಿಸದಿರುವಾಗ ಇಷ್ಟು ಅಗಾಧವಾದ ಭೂಮಿ-ಆಕಾಶಗಳ ಸಾಮ್ರಾಜ್ಯದ ಆಡಳಿತವು ಇಬ್ಬರು ದೇವರಿಂದ ನಡೆಯುವುದಾದರೂ ಹೇಗೆ?