Ques&Ans

ಪ್ರ. ಏಕದೇವ ವಿಶ್ವಾಸದ  ಇಸ್ಲಾಮಿ ಕಲ್ಪನೆ  ? 
. ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮುಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧ ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ.
ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ಅವನೇ ಸಮಸ್ತ ವಿಶ್ವವನ್ನೂ  ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೆ ಸೇರಿದೆ. ಆ ಏಕದೇವನನ್ನೇ ಪವಿತ್ರ ಕುರ್ಆನಿನಲ್ಲಿ 'ಅಲ್ಲಾಹ್' ಎಂದು ಕರೆಯಲಾಗಿದೆ. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಪರಿಪಾಲಕನೂ ಒಡೆಯನೂ ಅಧಿಪತಿಯು ಅಲ್ಲಾಹನೇ ಆಗಿರುವಾಗ ಮನುಷ್ಯನ ಆರಾಧನೆ, ದಾಸ್ಯ ಮತ್ತು ಅನುಸರಣೆಗಳೂ ಆತನಿಗೆ ಸಲ್ಲಬೇಕೆಂಬುದು ಬುದ್ಧಿಯ ಬೇಡಿಕೆಯಾಗಿದೆ.

ಪ್ರ. 'ಅಲ್ಲಾಹ್ 'ಮುಸ್ಲಿಮರ ದೇವರೇ?
 ಉ.ನಿಜವಾಗಿ 'ಅಲ್ಲಾಹ್ '  ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀ ಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಎಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ' ಅಲ್ಲಾಹ್ ' ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ.
" ಸರ್ವಸ್ತುತಿಯು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.''(1 . 1 )
ಪವಿತ್ರ ಕುರ್ಆನಿನ  ಕೊನೆಯ ಅಧ್ಯಾಯದಲ್ಲಿ ಅಲ್ಲಾಹನ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ;
"ಹೇಳಿರಿ - ನಾನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ, ಮತ್ತು ಮನುಷ್ಯರ ಆರಾಧ್ಯನ ಅಭಯ ಯಾಚಿಸುತ್ತೇನೆ." (114 : 1 - 3 )
ಪವಿತ್ರ ಕುರ್ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್ ರ (ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ- ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಅದು ಘಂಟಾಘೋಷವಾಗಿ ಸಾರುತ್ತದೆ.